ಉಗಮ - Poem by Praveen Kumar in Ananya Priya Lavanya

ನೀನೆಷ್ಟು ದೂರ ಹೋದರೇನು,
ಹಾರಿ ನೀನು ಬರಲೆ ಬೇಕು,
ನಿನ್ನೊಲವು ಎಷ್ಟು ಬತ್ತಿದರು,
ಮತ್ತೊಲವಿನೊರತೆ ಒಸರಬೇಕು.

ಜೇನು ತರಲು ಹೋದ ದುಂಬಿ
ತನ್ನ ಗೂಡು ಮರೆವುದುಂಟೆ?
ಕುಸುಮ ಚೆಲ್ಲಿದಂತ ಗಂಧ
ತನ್ನ ಮೂಲ ಮರೆವುದುಂಟೆ?

ಬೇರು ನೆಲದ ಅಡಿಯಲಿದ್ದೂ
ಆಕಾಶದತ್ತ ಬೆಳೆವ ಮರದ
ಜೀವದಾಸರೆ ಹೇಗೋ ಹಾಗೆ
ನನ್ನ ನಿನ್ನ ಬಿಡದ ನಂಟು.

ಬಿಸಿಲನೇರಿ ಗಾಳಿ ಮೇಲೆ
ದೂರ ದೂರ ಹೊರಟ ನೀನು
ಮುಸ್ಸಂಜೆ ಮೂಡಿದಾಗ ಮೆಲ್ಲ
ಬೆಳದಿಂಗಳೇರಿ ನಗುತ ಬರುವೆ.

ಹಗಲಲ್ಲಿ ಹೊರಗೆ ಹೊರಟ ನೀನು
ಕತ್ತಲಲ್ಲಿ ಪಿಸು ಮಾತಿನಿಂದ
ಬೆನ್ನಲ್ಲೆ ನೀನು ಇರುವೆನೆಂಬ
ಅದೃಶ್ಯ ಸತ್ಯ ತಿಳಿಸಿ ಕೊಡುವೆ.

ನೀನೆಲ್ಲೆ ಇರು, ನಿನ್ನ ಬೆಳಕು
ಅಂತರಿಕ್ಷದಾಳ ದಾಟಿ
ಉಗಮದತ್ತ ತೂರುತಿಹುದು,
ಆಂತರ್ಯ ಬಗೆದು ತೋರುತಿಹುದು.

ಇದು ಬ್ರಹ್ಮ ಗಂಟು, ಜೀವ ದಂಟು,
ಅನಂತಕಾಲ-ನೆಲದ ಅಂಟು,
ತಿಳಿಯದಂತ ಆಧ್ಯಾತ್ಮ ನಂಟು
ಕರ್ಮ ಕರ್ಮಾಂತರದ ಗಂಟು.

ನೀನೆಷ್ಟು ದೂರ ಹೊದರೇನು,
ಹೃದಯ ಕಿಡಿಕಿ ತೆರೆದು ಇಟ್ಟು,
ಮಧುರ ಭಾವ ಇಬ್ಬದಿಗೆ ಇಟ್ಟು
ಸದಾ ನನ್ನ ಜೊತೆಗೆ ಇರುವಿ.

ನಿನ್ನಾಂತರ್ಯ ಇಲ್ಲಿ, ದೇಹ ಅಲ್ಲಿ,
ಕಾಲೂರಿ ಇಲ್ಲಿ, ದೂರದಲ್ಲಿ
ನೀ ಕಾಲ ಚಕ್ರದೊಡನೆ ಸುತ್ತಿ,
ಇಲ್ಲಿ ಅಲ್ಲಿ ಎಲ್ಲೆಲ್ಲೂ ಇರುವೆ.

ಯಾಕೀ ಸುತ್ತಾಟ, ಓಟ ಮರೆತು
ಚಕ್ರಬಂಧದಾಟ ಮರೆತು,
ಉಗಮದತ್ತ ತಿರುಗಿ ಬಂದು
ಮತ್ತೆ ಮೂಲ ಸೇರು ಬೇಗ.

ನೋಡಿತ್ತ, ನಿನ್ನ ಉಗಮದತ್ತ,
ಬತ್ತಿದಂತ ಕಾರಂಜಿಯತ್ತ,
ನಂದಿಹೋದ ಬತ್ತಿಯಂತೆ
ಚೈತನ್ಯ ಮಸಕುಗೊಂಡಿದೆ.

ಬಯಸಿ ನಿಂತ ಜೀವ ಜೀವ
ಒಂದಾಗಿ ಕೂಡುವ ಸುಖವೆ ಅಮರ,
ನೀನೆಲ್ಲ ಮರೆತು, ಹಿಂತಿರುಗಿ ಬಂದು
ನನ್ನನ್ನು ಸೇರಿ ಬೆಸುಗೆಯಾಗು.

Poems by Praveen Kumar in Ananya Priya Lavanya

« prev poemಹಾದಿ

Add Comment